ಶ್ರೀ ಕ್ಷೇತ್ರ ಶೃಂಗೇರಿ

Shringeri

ತುಂಗಾ ನದಿಯ ದಂಡೆಯ ಮೇಲಿರುವ ಶ್ರಂಗೇರಿಯು ಪವಿತ್ರ ಯಾತ್ರಾಸ್ಥಳ. ರಾಮಾಯಣ ಕಾಲದ ವಿಭಾಂಡಕ ಮುನಿ ಹಾಗೂ ಆತನ ಮಗ ಋಷ್ಯಶೃಂಗ ಇಲ್ಲಿ ವಾಸವಾಗಿದ್ದರಂತೆ. ಅದರಿಂದಾಗಿ ಈ ಊರಿಗೆ ಋಷ್ಯಶೃಂಗಗಿರಿ ಎಂಬ ಹೆಸರು ಬಂದು ಕಾಲಕ್ರಮೇಣ ಅದೇ ಶೃಂಗಗಿರಿ ಹಾಗೂ ಶೃಂಗೇರಿ ಆಯಿತೆಂಬ ಪ್ರತೀತಿಯಿದೆ.

ಸಮಾಜ ಸುಧಾರಕರು ಅದ್ವೈತ ಸಿದ್ಧಾಂತದ ಪ್ರತಿಪಾದಕರೂ ಆದ ಶಂಕರಾಚಾರ್ಯರು (ಕ್ರಿ.ಶ.737-769) ಸ್ಥಾಪಿಸಿದ ಶ್ರೀ ಶಾರದಾ ಪೀಠದಿಂದಾಗಿ ಶೃಂಗೇರಿಯು ವಿಶ್ವ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು (ಕ್ರಿ.ಶ. 1331-1286) ಶೃಂಗೇರಿಯ ಪೀಠಾಧಿಪತಿಗಳಾಗಿದ್ದರು. ವಿಜಯನಗರದ ಅರಸರುಗಳು ಇಲ್ಲಿನ ಗುರುಗಳನ್ನು ರಾಜಧಾನಿಗೆ ಬರಮಾಡಿಕೊಂಡು ಅವರ ಆಶೀರ್ವಾದ ಅನುಗ್ರಹ ಪಡೆಯುತ್ತಿದ್ದರು. ಶ್ರೀ ಮಠಕ್ಕೆ ಅನೇಕ ಉಂಬಳಿಗಳನ್ನು ನೀಡಿದರು ಅಗ್ರಹಾರಗಳನ್ನು ಕಟ್ಟಿಸಿಕೊಟ್ಟರು. ಕೆಳದಿಯ ಅರಸರು, ಮೈಸೂರು ಒಡೆಯರು, ಮರಾಠರು, ಹೈದರಾಲಿ-ಟಿಪ್ಪುಸುಲ್ತಾನರು, ಹೈದರಬಾದಿನ ನಿಜಾಮರು ಎಲ್ಲರೂ ಶೃಂಗೇರಿ ಮಠದ ಬಗ್ಗೆ ಗೌರವಾದರಗಳನ್ನು ಹೊಂದಿದ್ದರು.

ಮೇಲಿನ ಚಿತ್ರದಲ್ಲಿರುವ 1336ರಲ್ಲಿ ನಿರ್ಮಾಣವಾದ ಶ್ರೀ ವಿದ್ಯಾಶಂಕರ ದೇವಾಲಯ ಅತೀ ಸುಂದರವಾದುದು. ತುಂಗಾ ನದಿಯ ಮಗ್ಗುಲಲ್ಲಿ ಎತ್ತರ ಜಗಲಿಯ ಮೇಲೆ ನಿಂತಿರುವ ಈ ಭವ್ಯ ಶಿಲಾರಚನೆಯು ಚಾಲುಕ್ಯ, ಹೊಯ್ಸಳ, ವಿಜಯನಗರ ವಾಸ್ತು ಶೈಲಿಗಳ ಸುಂದರ ಸಮ್ಮಿಶ್ರಣ. ಹೊರಮೈಯಲ್ಲಿ ಸುಂದರ ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯವು ಬೌದ್ಧ ಚೈತನ್ಯಗಳನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಮೇಲಿನ ವಿಮಾನವು ಚಾಲುಕ್ಯ ನಾಗರ ಶೈಲಿಯಲ್ಲಿದ್ದು ಇಡೀ ರಚನೆಗೆ ವಿಶೇಷ ಆಕರ್ಷಣೆ ಮತ್ತು ಭವ್ಯತೆಯನ್ನು ತಂದುಕೊಟ್ಟಿದೆ. ನವರಂಗದಲ್ಲಿ 12 ಕಂಬಗಳಿವೆ. ಇದನ್ನು ರಾಶಿ ಕಂಬಗಳೆಂದು ಕರೆಯುತ್ತಾರೆ. ಒಂದೊಂದು ತಿಂಗಳಲ್ಲಿ ಒಂದೊಂದು ಕಂಬದ ಮೇಲೆ ಸೂರ್ಯನ ಕಿರಣ ಬೀಳುವಂತೆ ಇವುಗಳ ನಿರ್ಮಾಣವಾಗಿದೆ.

ನದಿಯ ಆಚೆ ಮಗ್ಗುಲಿಗೆ ಸುಂದರ ವನ ಪರಿಸರದಲ್ಲಿ ಜಗದ್ಗುರುಗಳು ವಾಸಮಾಡುವ ನರಸಿಂಹವನ ಇದೆ.

ಸಂಕೀರ್ಣದಲ್ಲಿನ ಇತರೆ ದೇವಸ್ಥಾನಗಳು

  • ಶ್ರೀ ತೋರಣ ಗಣಪತಿ
  • ಶ್ರೀ ಆದಿ ಶಂಕರಾಚಾರ್ಯರು
  • ಶ್ರೀ ಶಕ್ತಿ ಗಣಪತಿ
  • ಶ್ರೀ ಕೋದಂಡರಾಮಸ್ವಾಮಿ
  • ಶ್ರೀ ಮಲಯಾಳ ಬ್ರಹ್ಮ
  • ಶ್ರೀ ಸುರೇಶ್ವರಾಚಾರ್ಯ
  • ಶ್ರೀ ವಾಗೇಶ್ವರಿ ವಿದ್ಯಾರಣ್ಯ
  • ಶ್ರೀ ಜನಾರ್ದನಸ್ವಾಮಿ
  • ಶ್ರೀ ಆಂಜನೇಯ
  • ಶ್ರೀ ಗರುಡ
  • ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ
Shringeri Gate

ಶೃಂಗೇರಿಗೆ ವರ್ಷದ ಎಲ್ಲಾ ಕಾಲದಲ್ಲಿ ಎಲ್ಲೆಡೆಯಿಂದ ಎಲ್ಲಾ ವರ್ಗದ ಜನರು ಭೇಟಿ ನೀಡುತ್ತಾರೆ. ಹೃದಯದಲ್ಲಿ ಭಕ್ತಿ-ಭರವಸೆಗಳನ್ನು ತುಂಬಿಕೊಂಡು ಹಿಂದಿರುಗುತ್ತಾರೆ.

ಶೃಂಗೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ತಾಲ್ಲೂಕು. ಇದು ಕೊಪ್ಪ, ನರಸಿಂಹರಾಜಪುರಗಳನ್ನೊಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ.

ತತ್ಸಮಾನ ಜ್ಞಾನ ಪುಟಗಳು

}